ಭಾರತದಲ್ಲಿ ಲಕ್ಷಾಂತರ ಜನರು ದಿನಗೂಲಿ, ಕೂಲಿ ಅಥವಾ ಸಣ್ಣ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಅಸಂಘಟಿತ ಕಾರ್ಮಿಕರು ಎನ್ನುತ್ತಾರೆ. ಇವರು ಕಾರ್ಖಾನೆ ಅಥವಾ ಕಚೇರಿಯಲ್ಲಿ ಕೆಲಸ ಮಾಡುವವರಂತೆ ಶಾಶ್ವತ ಉದ್ಯೋಗದಲ್ಲಿರೋದಿಲ್ಲ. ಕೆಲಸ ಇಲ್ಲದ ದಿನಗಳಲ್ಲಿ ಇವರಿಗೆ ಆದಾಯವಿಲ್ಲ.

ಇವರನ್ನು ಗುರುತಿಸಿ, ಅವರಿಗೆ ಸರ್ಕಾರದ ಸಹಾಯ ತಲುಪಿಸಲು ಭಾರತ ಸರ್ಕಾರ ಇ-ಶ್ರಮ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ.
ಇ-ಶ್ರಮ ಕಾರ್ಡ್ ಎಂದರೇನು?
ಇದು ಒಂದು ವಿಶೇಷ ಗುರುತಿನ ಕಾರ್ಡ್. ಈ ಕಾರ್ಡ್ ಹೊಂದಿರುವವರು ಸರ್ಕಾರದ ಹಲವಾರು ಯೋಜನೆಗಳಿಂದ ನೇರ ಲಾಭ ಪಡೆಯಬಹುದು.
- ಇದರಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ (UAN) ಇರುತ್ತದೆ.
- ಒಮ್ಮೆ ಕಾರ್ಡ್ ಮಾಡಿದರೆ, ಅದು ದೇಶದಾದ್ಯಂತ ಎಲ್ಲೆಡೆ ಮಾನ್ಯ.
ಯಾರು ಮಾಡಿಸಬಹುದು?
ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರೂ ಮಾಡಿಸಬಹುದು. ಉದಾಹರಣೆಗೆ:
- ಕಟ್ಟಡ ಕೆಲಸ ಮಾಡುವವರು
- ಆಟೋ, ಕ್ಯಾಬ್ ಚಾಲಕರು
- ಕೃಷಿ ಕೂಲಿ
- ಬೀದಿ ವ್ಯಾಪಾರಿಗಳು
- ಮೀನುಗಾರರು
- ಗೃಹಕಾರ್ಮಿಕರು (ಮನೆ ಕೆಲಸ ಮಾಡುವವರು)
ನೋಂದಣಿ ಮಾಡಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ನೋಂದಣಿ ಮಾಡಲು ಕಾರ್ಮಿಕರು ತಮ್ಮ ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಸಮೀಪದ ಕಾಮನ್ ಸರ್ವೀಸ್ ಸೆಂಟರ್ (CSC) ನಲ್ಲಿ ಸಹಾಯ ಪಡೆಯಬಹುದು.
ಇ-ಶ್ರಮ ಕಾರ್ಡ್‌ನ ಪ್ರಯೋಜನಗಳು
- ವಿಮೆ – ಕಾರ್ಡ್ ಹೊಂದಿದವರಿಗೆ 2 ಲಕ್ಷ ರೂಪಾಯಿವರೆಗೆ ಉಚಿತ ಅಪಘಾತ ವಿಮೆ ಸಿಗುತ್ತದೆ.
- ಸರ್ಕಾರದ ನೆರವು – ಕಾರ್ಮಿಕರಿಗೆ ಘೋಷಿಸಲಾದ ಎಲ್ಲ ಯೋಜನೆಗಳು ನೇರವಾಗಿ ಲಭ್ಯವಾಗುತ್ತವೆ.
- ಒಂದೇ ಕಾರ್ಡ್, ಎಲ್ಲೆಡೆ ಲಾಭ – ದೇಶದ ಯಾವ ಭಾಗದಲ್ಲೇ ಕೆಲಸ ಮಾಡಿದರೂ, ಅದೇ ಕಾರ್ಡ್ ಮೂಲಕ ಸೌಲಭ್ಯ ಸಿಗುತ್ತದೆ.
- ಹಣ ನೇರವಾಗಿ ಖಾತೆಗೆ – ಸರ್ಕಾರ ನೀಡುವ ಧನಸಹಾಯ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
- ಭವಿಷ್ಯದ ಯೋಜನೆಗಳು – ನಿವೃತ್ತಿ ಪಿಂಚಣಿ, ಆರೋಗ್ಯ ಸಹಾಯ, ಮಕ್ಕಳ ಶಿಕ್ಷಣ ನೆರವು ಮುಂತಾದವುಗಳನ್ನು ಸರ್ಕಾರ ಮುಂದಕ್ಕೆ ಈ ಕಾರ್ಡ್ ಮೂಲಕ ನೀಡಲು ಯೋಜಿಸಿದೆ.
ಯಾಕೆ ಅಗತ್ಯ?
ಭಾರತದಲ್ಲಿ 90% ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿದ್ದಾರೆ. ಇವರ ಬಗ್ಗೆ ಸರಿಯಾದ ಮಾಹಿತಿ ಸರ್ಕಾರಕ್ಕೆ ಇರಲಿಲ್ಲ. ಕೋವಿಡ್ ಸಮಯದಲ್ಲಿ ಇವರಿಗೆ ಸಹಾಯ ತಲುಪಿಸಲು ಸರ್ಕಾರಕ್ಕೆ ಕಷ್ಟವಾಯಿತು. ಆದ್ದರಿಂದ ಎಲ್ಲ ಕಾರ್ಮಿಕರನ್ನು ಒಂದೇ ಪೋರ್ಟಲ್‌ನಲ್ಲಿ ನೋಂದಾಯಿಸಿ, ಅಗತ್ಯವಿದ್ದಾಗ ಬೇಗನೆ ನೆರವು ನೀಡಲು ಈ ಯೋಜನೆ ಪ್ರಾರಂಭವಾಯಿತು.